ಕೈಲಾಸ 1

ಹಿಮಾಲಯದ ಮಾನಸ ಸರೋವರದ ಪಕ್ಕದಲ್ಲಿರುವ ಪರ್ವತ. ಪ್ರಮಥಗಣಗಳ ಒಡೆಯನಾದ ಶಿವನ ವಾಸಸ್ಥಾನವೆಂದು ಹಿಂದೂಗಳ ನಂಬಿಕೆ. ಸತ್ತ್ವಲೋಕ, ವೈಕುಂಠ, ಕೈಲಾಸ-ಇವು ಆಕಾಶದ ಮೇಲಿರುವ ಪವಿತ್ರಲೋಕಗಳೆಂದು ಪುರಾಣಗಳ ಹೇಳಿಕೆ. ಕೈಲಾಸಕ್ಷೇತ್ರ ಪರಮೇಶ್ವರನ ರಾಜಧಾನಿಯೆಂದೂ ಪಾರ್ವತಿ, ಗಣಪತಿ, ವೀರಭದ್ರ, ಕುಮಾರ, ನಂದಿ, ಷಣ್ಮುಖ, ಭೃಂಗಿ ಮೊದಲಾದ ಪ್ರಮಥರು ಇಲ್ಲಿ ವಾಸಮಾಡುವರೆಂದೂ ಪುರಾಣಗಳು ಹೇಳುತ್ತವೆ. ಅವುಗಳ ಪ್ರಕಾರ ಇದರ ಸ್ಥಾನ ಮಧ್ಯ ಹಿಮಾಲಯದ ಹಿಂಭಾಗವೆನ್ನಲಾಗಿದೆ.							(ಬಿ.ಎಸ್.)

ಭೂಗೋಳಶಾಸ್ತ್ರದ ರೀತ್ಯ ಕೈಲಾಸಪರ್ವತಶ್ರೇಣಿ ಹಿಮಾಲಯದ ಲಡಾಖ್ ಶ್ರೇಣಿಗೆ 50 ಮೈ. ದೂರದಲ್ಲಿ ಸಿಂಧೂನದಿಯ ಉತ್ತರ ದಡದ ಕಡೆಗೆ ಹಬ್ಬಿದೆ. ಕೈಲಾಸ ಶಿಖರದ ಎತ್ತರ 22,028'. ಶಿಖರದ ಆಕಾರ ಹಿಂದೂ ದೇವಾಲಯದ ಗೋಪುರದಂತಿದೆ. ಪರ್ವತಶ್ರೇಣಿ ಆರ್ಕೋಸ್, ಕಂಗ್ಲಾಮರೇಟು ಹಾಗೂ ಇನ್ನಿತರ ಶಿಲೆಗಳಿಂದಾದುದು. ಕಂಗ್ಲಾಮರೇಟು ಶಿಲಾಸ್ತರದ ದಪ್ಪ ಸು. 2,000 ಮೀಟರುಗಳೆಂದು ಅಂದಾಜು ಮಾಡಲಾಗಿದೆ. ಶ್ರೇಣಿಯ ಉತ್ತರ ಭಾಗದಲ್ಲಿ `ಕೈಲಾಸ ಗ್ರಾನೈಟ್ ಶಿಲೆಯ ಮೇಲೆ ಕಂಗ್ಲಾಮರೇಟು ಶಿಲೆ ಸಂಗ್ರಹವಾಗಿದೆ. ಕೈಲಾಸಗ್ರಾನೈಟ್ ಶಿಲೆ ಹಾರ್ನ್‍ಬ್ಲೆಂಡ್ ರೀತಿಯದು. ಈ ಶ್ರೇಣಿ ಕ್ರಿಟೇಷಸ್ ಕಲ್ಪದಲ್ಲಿ ನಿರ್ಮಾಣಗೊಂಡದ್ದೆಂದು ಭೂವಿಜ್ಞಾನಿಗಳ ಅಭಿಪ್ರಾಯ. ಇಲ್ಲಿ ಇಯೋಸೀನ್ ಕಲ್ಪದ ಅನಂತರದ ಶಿಲೆಗಳಾವುವೂ ದೊರೆತಿಲ್ಲ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ